
ಮೀಸಲಾತಿಯ ವಂಚನೆಯನ್ನು ಇಷ್ಟೊಂದು ಅಪಹಾಸ್ಯ ಮಾಡಿದವರು ಮತ್ತೊಬ್ಬರಿರಲಾರರು. ಇದಕ್ಕೆ ಉತ್ತರಿಸಬೇಕಾಗಿರುವ ಸಿದ್ದರಾಮಯ್ಯ ಬೀದಿಯಲ್ಲಿ ಜನ ಹೋರಾಡುತ್ತಿದ್ದರೆ, ನನಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ಮೌನ ವಹಿಸುತ್ತಾರೆ. ಇದು ಸಿದ್ದು ನೇತೃತ್ವದ ಸರಕಾರದ್ದೇ ಚಿತಾವಣೆ. ಡಿ.ಎಸ್.ಎಸ್. ಶಿವಣ್ಣ ಅವರು ಸಿದ್ದರಾಮಯ್ಯ ಅವರನ್ನು ಸೈಡಿಗಿಟ್ಟು, ನಾಗಮೋಹನ ದಾಸ್ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ನಾಗಮೋಹನ್ ದಾಸ್ ಇಲ್ಲಿ ನೆಪ ಮಾತ್ರ. ಇದರಲ್ಲಿ ನಡೆದಿರುವ ಎಲ್ಲಾ ಕುತಂತ್ರಗಳ ಹಿಂದೆ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ.
ವರದಿ ಕೊಡುವುದಷ್ಟೇ ದಾಸ್ ಅವರ ಕೆಲಸ. ಜಾರಿಗೊಳಿಸುವಾಗ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದು ಸರಕಾರ. ಎಲ್ಲಿಯವರೆಗೆ ಸಿದ್ದರಾಮಯ್ಯ ಅವರನ್ನು ನಂಬಿಸುತ್ತೀರಿ ಗೆಳೆಯರೆ. ಈಗಲಾದರೂ ಸಿದ್ದರಾಮಯ್ಯ ಸರಿಪಡಿಸುವುದಾಗಿ ಹೇಳಬಹುದಲ್ಲವೆ? ಸಮೀಕ್ಷೆಯಲ್ಲಿ ಬಗೈ ಜನಾಂಗದ ಜನಸಂಖ್ಯೆಯನ್ನೂ ಸಹ ಕಡಿಮೆ ತೋರಿಸಲಾಗಿತ್ತು.
ಪ್ರತಿರೋಧ ಪ್ರಬಲವಾಗುತ್ತಿದ್ದಂತೆ 1% ಹೆಚ್ಚಾಯಿತು. ಇದ್ದಕ್ಕಿದ್ದಂತೆ 1% ಎಲ್ಲಿಂದ ಬಂತು? ಇದರಿಂದ ಸಮೀಕ್ಷೆಗೆ ಮೊದಲಿನಿಂದಲೂ ಬಲಗೈ ಟಾರ್ಗೆಟೆಡ್ ಎನ್ನುವುದು ಗೊತ್ತಾಗುತ್ತದೆ. ಇದೆಲ್ಲ ಸಿದ್ದರಾಮಯ್ಯನ ಪೂರ್ವ ನಿಯೋಜಿನ ಕೃತ್ಯ.
ಅಂಬೇಡ್ಕರ್ ಹೆಸರು ಹೇಳುತ್ತಲೇ ದಲಿತರನ್ನು ತುಳಿಯುತ್ತ ಬಂದವರು ಸಿದ್ದರಾಮಯ್ಯ. ಇಲ್ಲಿಯವರೆಗೆ ದಲಿತ ರಾಜಕಾರಣಿಗಳನ್ನು ಅವಮಾನಿಸುತ್ತಾ, ಮುಖ್ಯಮಂತ್ರಿಗಳಾಗದಂತೆ ನೋಡಿಕೊಂಡವರು ಇವರು. ಈಗಲೂ ಖರ್ಗೆ ಅವರನ್ನು ಕಂಡರೆ ಉರಿದು ಬೀಳುತ್ತಾರೆ. ಯಾಕೆ? ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯ ಒಕ್ಕೂಟ ಗೆದ್ದರೆ ಪ್ರಧಾನಿ ಯಾರಾಗಬೇಕು ಎಂದು ಪ್ರಶ್ನೆ ಎದ್ದಾಗ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರು ಖರ್ಗೆ ಹೆಸರು ಹೇಳಿದರೆ, ಸಿದ್ದರಾಮಯ್ಯ ‘ಕರ್ನಾಟಕದಿಂದ ಅಂತವರು ಯಾರೂ ಇಲ್ಲ’ ಎಂದು ಹೇಳಿದ್ದರು. ಇದನ್ನೇ ಎರಡು ಸಂದರ್ಭಗಳಲ್ಲಿ ಹೇಳಿದ್ದಾರೆ. ಅಂದರೆ ತವರು ರಾಜ್ಯದ ಒಬ್ಬ ಸಿಎಂ ಹೀಗೆ ಹೇಳುತಾರೆಂದರೆ ಇಡೀ ದೇಶ ಇದನ್ನ ಹೇಗೆ ನೋಡಬಹುದು?
ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ದಾರಿ ಮಾಡಿಕೊಟ್ಟು ಕೇಂದ್ರಕ್ಕೆ ಹೋದವರು. ಆ ಬಗ್ಗೆ ಕೃತಜ್ಞತೆ ಇಟ್ಟುಕೊಳ್ಳಬೇಕಾದ ಸಿದ್ದು ದುರಹಂಕಾರ ಹ್ಯಾಗಿದೆ ಎನ್ನುವುದನ್ನು ಸಿದ್ದು ಪರ ಬ್ಯಾಟಿಂಗ್ ಬೀಸುವ ದಲಿತ ನಾಯಕರು ಗಮನಿಸಬೇಕು.
ಅಂದರೆ ಕೇಂದ್ರದಲ್ಲಿ ಪ್ರಧಾನಿ ಆಗೋದಕ್ಕೆ ಅಲ್ಲಿ ಖರ್ಗೆ ಅವರನ್ನು ವಿರೋಧಿಸುತ್ತಾರೆ, ಇಲ್ಲಿ ರಾಜ್ಯ ರಾಜಕಾರಣಕ್ಕೆ ಬಂದರೆ ಪರಮೇಶ್ವರ್ ಅವರನ್ನು ಅಖಾಡದಲ್ಲೇ ಸೋಲಿಸಿ ತಾವು ನಿರಾಯಾಸವಾಗಿ ಮುಖ್ಯಮಂತ್ರಿ ಆಗುತ್ತಾರೆ. ಇವತ್ತಿನ ನಮ್ಮೆಲ್ಲಾ ಸಂಕಷ್ಟಗಳ ಹಿಂದಿರುವ ಈ ಜಾತಿವಾದಿ, ಮನುಷ್ಯವಿರೋಧಿ ಸಿದ್ದರಾಮಯ್ಯನನ್ನು ಇಲ್ಲಿಯವರೆಗೆ ಮರೆಮಾಚುತ್ತಾ ಬಂದಿರುವವರೇ ದಲಿತ ನಾಯಕರು.
ದಲಿತರಿಗೆ ಮುಳುಗಡೆ ಭಾಗ್ಯ ಸ್ವ-ಜಾತಿಗೆ ಮೆಲ್ಲುವ ಭಾಗ್ಯ
ಈಗ 38 ಸಾವಿರ ಕೋಟಿ ದಲಿತರ ಹಣ ಲೂಟಿ ಮಾಡುತ್ತಿರುವುದೂ ಇದೇ ಸಿದ್ದರಾಮಯ್ಯ. ಇನ್ನು ಅವರ ಬದುಕನ್ನ ಮೇಲೆತ್ತುವುದು ಎಲ್ಲಿಂದ ಬಂತು? ಎಸ್.ಸಿ.ಗಳನ್ನು ಅವರವರೇ ಕಚ್ಚಾಡುವಂತೆ ಮಾಡಿ ಈಗ ಏನೂ ಗೊತ್ತಿಲ್ಲದವನಂತೆ ಮೌನ ವಹಿಸಿದ್ದಾರೆ. ಮತ್ತೊಂದು ಕಡೆ ತನ್ನ ಜಾತಿಯನ್ನ ಸೇಫೆಸ್ಟ್ ಪ್ಲೇಸಿಗೆ ಸೇರಿಸಲು ಅಂದರೆ ಎಸ್.ಟಿ.ಗೆ ಸೇರಿಸಲು ಮಸಲತ್ತು ನಡೆಸಿದ್ದಾರೆ. ಕೇಂದ್ರಕ್ಕೆ ವರದಿ ಶಿಫಾರಸ್ಸು ಮಾಡುವಾಗ ಕೆಲವರು ವಿರೋಧಿಸಿದ್ದರು. ವಿರೋಧಿಸುವವರನ್ನು ‘ತಾತ್ಕಾಲಿಕವಾಗಿ’ ಸುಮ್ಮನಿರಿಸಲು ಇದು ನನ್ನ ಆಲೋಚನೆ ಅಲ್ಲ. ಇದರಲ್ಲಿ ನನ್ನ ಆಸಕ್ತಿ ಏನೂ ಇಲ್ಲ. ಬದಲಿಗೆ ಇದು ಬಿಜೆಪಿಯ ಈಶ್ವರಪ್ಪನಿಂದ ಪಾರಂಭ ಆಗಿದ್ದು. ನಾನು ಕೇವಲ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿದ್ದೇನೆ ಅಷ್ಟೇ ಎಂದಿದ್ದರು.
ಆದರೆ ಇದೇ ಸಿದ್ದರಾಮಯ್ಯ ಇಷ್ಟು ದಿನಗಳು ಬಿಟ್ಟು ಇದೇ ತಿಂಗಳ 2ನೇ ತಾರೀಕು ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ರಾಜ್ಯ ಸರಕಾರದ ಕೈಯ್ಯಲ್ಲಿದ್ದಿದ್ದರೆ ಆಗಲೇ ಶಿಫಾರಸು ಮಾಡಿಬಿಡುತ್ತಿದ್ದೆ ಎಂದು ಹೇಳಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ. ನಿಜವಾದ ಸಿದ್ದರಾಮಯ್ಯ ಅವರನ್ನ ನೀವು ಹೀಗೆ ಹುಡುಕಬೇಕು? ಒಂದುಕಡೆ ಎಸ್.ಸಿ.ಗಳನ್ನು ಅತಂತ್ರಗೊಳಿಸಿ, ಮತ್ತೊಂದೆಡೆ ಎಸ್.ಟಿ.ಗಳ ಬಾಳಿಗೂ ಕಲ್ಲು ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾದ ಜನರ ಪಾಲಿನಲ್ಲಿ ತನ್ನ ಜನಾಂಗಕ್ಕೆ ಮೃಷ್ಠಾನ್ನ ಬಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಆ ಜನ ಇವರ ವಿರುದ್ಧ ಈಜಲು ಸಾಧ್ಯವೆ? ಇದಲ್ಲವೆ ಪ್ರ‍್ರಜಾಪ್ರಭುತ್ವವಾದಿ,
ಅಂಬೇಡ್ಕರ್‌ವಾದಿ, ವಿಚಾರವಾದಿ ಸಿದ್ದರಾಮಯ್ಯ ಅಂದರೆ? ಆದ್ದರಿಂದ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ದಲಿತ ನಾಯಕರು ದಲಿತರನ್ನು ಮತ್ತಷ್ಟು ಕಷ್ಟಕ್ಕೆ ನೂಕಲಿದ್ದಾರೆ.
ದಯಾನಂದ ಮೂರ್ತಿ, ಕುಕ್ಕರಹಳ್ಳಿ
ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ದಾರಿ ಮಾಡಿಕೊಟ್ಟು ಕೇಂದ್ರಕ್ಕೆ ಹೋದವರು. ಆ ಬಗ್ಗೆ ಕೃತಜ್ಞತೆ ಇಟ್ಟುಕೊಳ್ಳಬೇಕಾದ ಸಿದ್ದು ದುರಹಂಕಾರ ಹ್ಯಾಗಿದೆ ಎನ್ನುವುದನ್ನು ಸಿದ್ದು ಪರ ಬ್ಯಾಟಿಂಗ್ ಬೀಸುವ ದಲಿತ ನಾಯಕರು ಗಮನಿಸಬೇಕು.

ವಾಸ್ತವವಾಗಿ ಮನುಷ್ಯನ ಆಂತರಂಗವನ್ನು ಬೆಳಗುವ ಬಸವ ಧರ್ಮವೇ ದೇಶದ ಪ್ರಮುಖ ಧರ್ಮ ಆಗಬೇಕಿತ್ತು. ಅಂತಹ ವಿಶ್ವ ಧರ್ಮವೊಂದು ಅಲ್ಪಸಂಖ್ಯಾತ ಧರ್ಮ ಆಗಲು ಈ ಧರ್ಮವನ್ನು ಬೆಳೆಯಲು ಬಿಡದಿರುವುದೇ ಕಾರಣ. ಬೌದ್ಧ ಧರ್ಮವನ್ನು ಬಿಟ್ಟರೆ ವಿಶಾಲ ಭಾರತದದಾದ್ಯಂತ ಬೆಳೆದು ನಿಲ್ಲಬೇಕಾಗಿದ್ದ ಧರ್ಮ ಎಂದರೆ ಅದುವೇ ಬಸವ ಧರ್ಮ. ಎಲ್ಲ ಕಡೆಯೂ ಅಧರ್ಮವೇ ತುಂಬಿರುವಾಗ, ಧರ್ಮವೇ ಎದ್ದು ಶೋಷಣೆಗೆ ನಿಂತಿರುವಾಗ ಇಂತಹ ಧರ್ಮಶೂನ್ಯ ದಿನಗಳಲ್ಲಿ ಈ ನಿಟ್ಟಿನಲ್ಲಿ ಯಾಕೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿಲ್ಲ? ಇತ್ತೀಚೆಗೆ ಒಂದು ತಿಂಗಳ ಕಾಲ ಸಂವಾದ ಏರ್ಪಟ್ಟಿದ್ದನ್ನು ಗಮನಿಸಿದ್ದೇನೆ. ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಶಕ್ತಿಗಳು ಒಳ ನುಸುಳಿ ನಡೆಸುತ್ತಿದ್ದ ಹುನ್ನಾರಗಳ ವಿರುದ್ಧ ಕಠಿಣ ತೀರ್ಮಾವನ್ನು ತೆಗೆದುಕೊಂಡು ಹೊರಗೆ ಅಟ್ಟಿದ್ದು ತುಂಬಾ ಒಳ್ಳೆಯ ಬೆಳವಣಿಗೆ. ಆದರೆ ಅದರ ನಂತರದ ಪರಿಣಾಮ ಗೊತ್ತಾಗುತ್ತಿಲ್ಲ. ಅಲ್ಲಿ ಆದ ಮಾತುಕತೆಗಳು ಪುಸ್ತಕ ರೂಪ ಪಡೆದವೆ? ಆ ಕುರಿತು ಜನ ಕುತೂಹಲಿಗಳಾಗಿದ್ದಾರೆ.
ಒಂದು ಮರದ ಕೆಳಗೆ ಕುಳಿತು ಮಾತನಾಡಿದರೆ ಸಾಕು ದಸಂಸದ ಮಾತುಗಳು ಕರ್ನಾಟಕದಾದ್ಯಂತ ರಿಂಗಣಿಸುತ್ತಿತ್ತು. ವಿದ್ವಾಂಸರು, ಚಿಂತಕರು, ಲೇಖಕರು, ವಿಚಾರವಂತರು, ಕಲಾವಿದರು, ಹೋರಾಟಗಾರರು, ಕವಿಗಳು ಹೀಗೆ ಬಹುಮುಖಿ ಶಕ್ತಿಗಳಾಗಿ ಅಲ್ಲಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಹುಟ್ಟಿ ಬಂದರು. ಈ ಬೆಳವಣಿಗೆಯಿಂದ ಜನ ಬೀದಿಬೀದಿಗಳಲ್ಲಿ ಪ್ರಶ್ನಿಸಲಾರಂಭಿಸಿದರು. ತಮಗಾದ ಅನ್ಯಾಯದ ವಿರುದ್ಧ ತಿರುಗಿಬೀಳಲಾರಂಭಿಸಿದರು. ಹೋರಾಟಗಳಿಗೆ ದುಮ್ಮಿಕ್ಕುತ್ತಿದ್ದರು. ಇಲ್ಲಿ ಹೋರಾಟಗಳಿಗೆ ಹಣದ ಅಗತ್ಯವೇ ಬೀಳುತ್ತಿರಲಿಲ್ಲ. ಅಲ್ಲಿ ಪ್ರಾಮಾಣಿಕತೆ ಇತ್ತು. ನೈಜತೆ ಅವರೆದೆಗಳಲ್ಲಿ ಮನೆ ಮಾಡಿತ್ತು. ಈಗ ನೋಡಿ ಕೋಟಿ ಕೋಟಿ ಹಣ ಖರ್ಚು ಮಾಡಿ ‘ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ’ದ ಹೆಸರಿನಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸಂಸ್ಥೆಗಳನ್ನ ಸರಕಾರವೇ ಕಟ್ಟಿಕೊಟ್ಟಿದೆ. ಒಬ್ಬ ವಿದ್ವಾಂಸ, ಒಬ್ಬ ಹೋರಾಟಗಾರ, ಚಿಂತಕ, ಲೇಖಕ ಅಲ್ಲಿಂದ ಹುಟ್ಟಿ ಬರಲಿಲ್ಲ. ಹಾಗೆಯೇ ಮಠದೊಳಗೆ ಬಸವಣ್ಣನನ್ನು ಬಂಧಿಸಿದ್ದರಿAದ ಬಸವಣ್ಣ ಆರಾಧ್ಯ ದೇವತೆ ಆದ. ಅವನನ್ನ ಮನುಷ್ಯನನ್ನಾಗಿ ನೋಡಲು ಬಿಡಲಿಲ್ಲ. ಮತ್ತೊಂದು ಕಡೆ ಅನುಯಾಯಿಗಳನ್ನ ನೋಡಿದ ಜನ ಬಸವಣ್ಣನ ಹತ್ತಿರ ಸುಳಿಯಲಿಲ್ಲ.
ಇರುವ ಜನರನ್ನೆ ನಾವು ಅಷ್ಟು ಇದ್ದೇವೆ. ಇಷ್ಟು ಇದ್ದೇವೆ ಎಂದು ಎಣಿಸುತ್ತಾ ಕುಳಿತಿರುವುದೇ ದುರಂತ. ಯಾವ ಧರ್ಮ ಇಡೀ ನೆಲವನ್ನು ಆವರಿಸಿಕೊಳ್ಳಬೇಕು ಎಂದು ಬಸವಣ್ಣ ಪ್ರಯತ್ನ ಹಾಕಿದರೋ, ಅಂತಹ ಪ್ರಯತ್ನಕ್ಕೆ ಈಗ ಸೋಲಾಗಿದೆ. ಬಸವ ತತ್ವ ಯಾವತ್ತೂ ಕ್ರಿಯಾಶೀಲವಾದುದು. ಅಂತಹ ಧರ್ಮ ನಿಂತ ನೀರಾಯಿತು.
ಸರಳವಾಗಿ ಹೇಳಬೇಕೆಂದರೆ ಬಸವಣ್ಣನ ಅನುಯಾಯಿ ಎಂದರೆ ಬಸವಣ್ಣನವರ ‘ವಚನ’ ಪಾಲಿಸುವವನು. ‘ವಚನ’ ತಪ್ಪಿ ನಡೆದಡೆ ಎಲ್ಲಿಯ ಲಿಂಗಾಯತ? ಸಮಾಜವನ್ನ ಸರಿ ದಾರಿಗೆ ತರಲು ಸಮಾಜದ ಮಧ್ಯ ನಿಂತು ಕೆಲಸ ಮಾಡಬೇಕು. ಲಿಂಗಾಯತರ ಮಧ್ಯ ನಿಂತು ಅಲ್ಲ. ಅಂದರೆ ಒಳಗೊಳ್ಳುವಿಕೆ ಆಗ ಮಾತ್ರ ಸಾಧ್ಯ ಆಗಲಿದೆ ಎಂದು ಹೇಳಲು ಹೊರಟೆನಷ್ಟೆ, ಅಲ್ಪಸಂಖ್ಯಾತರಾಗಿ ಉಳಿಯದೆ ಬಹುಸಂಖ್ಯಾತರಾಗುವ ಕಡೆ ಹೆಚ್ಚು ಹೆಚ್ಚು ಪ್ರಯತ್ನಗಳು ನಡೆಯಲಿ. ‘ವಚನ’ ಬದ್ಧನು ಲಿಂಗಾಯತ ಎನ್ನುವಂತಾಗಲಿ. ತಿಳಿವಿನಿಂದ ಬಸವಣ್ಣನವರ ಧರ್ಮ ಅನುಸರಿಸುವವನೆ ಬಸವಣ್ಣನ ಅನುಯಾಯಿ, ಚಿಹ್ನೆಯಿಂದ ನಿರ್ಧಾರ ಮಾಡುವುದಾದರೆ ಅವನು ಅನುಯಾಯಿ ಹೇಗಾಗುತ್ತಾನೆ? ಅವೆಲ್ಲ ಆಚರಣೆಗಳಾಗಿ ಉಳಿದು ಕೀಲಗೆಟ್ಟ ಸ್ಥಿತಿಗೆ ತಲುಪಿ, ಓದು ನಿಂತು ಬರುಬರುತ್ತಾ ಯಾಂತ್ರಿಕವಾಗಿಬಿಡುತ್ತವೆ. ಅದು ‘ಕ್ರಿಯಾಶೀಲ’ವಾದ ಧರ್ಮವೊಂದರ ಸೋಲಾಗಿ ಪರಿಣಮಿಸುತ್ತದೆ.
ಓದಿನ ಮೂಲಕ ಮನಸಿನಲ್ಲಿ ಬಸವಣ್ಣ ಸ್ಥಾಪನೆ ಆಗದ ಹೊರತು, ಬಾಹ್ಯ ವಸ್ತುವಿನ ಮೂಲಕ ಬಸವಣ್ಣನನ್ನು ಸ್ಥಾಪನೆ ಮಾಡಿಕೊಳ್ಳಲು ಸಾಧ್ಯವೆ? ಯಾರಿಗೇ ಆದರೂ ಬಸವನ ತತ್ವ, ಓದು ಮುಖ್ಯ. ಆ ಮೂಲಕ ಬಸವ ನಮ್ಮೊಳಗೆ ಇಳಿಯಬೇಕು. ಆಗ ಬಸವಣ್ಣನನ್ನು ಬಿಟ್ಟು ಬೇರೆ ದೇವಸ್ಥಾನಗಳನ್ನು ಸುತ್ತಿಯೂ ಲಿಂಗಾಯತನಾಗಿ ಉಳಿದುಬಿಡುವ ಅಪಾಯ ತಪ್ಪುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮಠವೂ ‘ಅನುಭವ’ ಮಂಟಪ ಆಗಲಿ. ಅಂತಹ ಎತ್ತರದ ನಿಲುಕಿನ ಮನೆಯೇ ‘ಮಹಾಮನೆ’ ಅಲ್ಲವೆ? ಅದಕ್ಕಾಗಿಯೇ ಅಂದು ಆ ಮಹಾ ಮನೆಗೆ ಬಂದವರನ್ನೆಲ್ಲಾ ವಿದ್ಯಾವಂತರಾಗಿ ಮಾಡಿದರು. “ವೈಜ್ಞಾನಿಕವಾಗಿ” ಆಲೋಚಿಸುವಂತೆ ಮಾಡಿದರು. ಅಕ್ಷರ ಬಾರದ ಅವಮಾನಿತ ಜನ, ಪಂಡಿತರು ಮಾತ್ರವೇ ಮಾತನಾಡುತ್ತಿದ್ದ ವಿಷಯಗಳನ್ನು ಎತ್ತಿಕೊಂಡು ಸಮರ್ಥವಾಗಿ ವಚನಗಳ ಮೂಲಕ ಸಂವಾದ ನಡೆಸಿದರು. ಬಸವಣ್ಣನವರ ನಂತರ ಇವೆಲ್ಲ ಯಾಕೆ ಸಾಧ್ಯವಾಗಲಿಲ್ಲ? ಮೂಲ ಆಶಯದಿಂದ ದೂರವಾಗಿದ್ದಾದರೂ ಹೇಗೆ? ಕರ್ನಾಟಕದಾದ್ಯಂತ ನಿಮ್ಮವೇ ಆದ ಶಿಕ್ಷಣ ಸಂಸ್ಥೆಗಳಿದ್ದು ಅವು ಯಾವ ರೀತಿಯ ಸಂಸ್ಕೃತಿಯನ್ನ ಮಕ್ಕಳಲ್ಲಿ ಬಿತ್ತಿವೆ? ಬಸವಣ್ಣನ ತಿಳಿಗನ್ನಡವನ್ನೇ ಬಿಟ್ಟು ಸಂಸ್ಕೃತ ಹೇಳಿಕೊಡಲಾಗುತ್ತಿದೆ. ಕ್ರಾಂತಿಕಾರಿ ಬಸವಣ್ಣ ಎಂದು ಕರೆದರಾದರೂ, ವಾಸ್ತವದಲ್ಲಿ ಯಾವ ಕ್ರಾಂತಿಯೂ ಆಗಲಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳನ್ನು ಸರಿಪಡಿಸಿಕೊಂಡರೆ ಈಗಲೂ ಗೆಲುವು ಸಾಧ್ಯವಿದೆ. ಸತ್ಯ ತಿಳಿಯಲು ಬುದ್ಧ ಮನೆ ಬಿಟ್ಟು ಆಚೆ ಬಂದAತೆ ಮಠದೊಳಗಿನಿಂದ ಬಸವಣ್ಣನನ್ನು ಜನರತ್ತ ಬರಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಅಲ್ಪಸಂಖ್ಯಾತ ಧರ್ಮ ಎನ್ನುವುದನ್ನು ಅಳಿಸಿ ಎಲ್ಲರ ಧರ್ಮವಾಗಿಸುವ ಸದವಕಾಶವನ್ನು ಮಾಡಿಕೊಡಬೇಕಾಗಿದೆ. ಒಂದು ಧರ್ಮವನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಪ್ರಾಜ್ಞರು ನನ್ನ ಈ ಅಭಿಪ್ರಾಯಗಳನ್ನು ತಪ್ಪು ತಿಳಿಯಲಾರರು ಎಂದು ಭಾವಿಸುತ್ತೇನೆ. ಆದರೂ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿ ನಡೆಯುತ್ತಿವೆ ಎನ್ನುವುದನ್ನು ಹೆಮ್ಮೆಯಿಂದಲೇ ಹೇಳಬಯಸುತ್ತೇನೆ.
ದಯಾನಂದ ಮೂರ್ತಿ, ಕುಕ್ಕರಹಳ್ಳಿ
ಓದಿನ ಮೂಲಕ ಮನಸಿನಲ್ಲಿ ಬಸವಣ್ಣ ಸ್ಥಾಪನೆ ಆಗದ ಹೊರತು, ಬಾಹ್ಯ ವಸ್ತುವಿನ ಮೂಲಕ ಬಸವಣ್ಣನನ್ನು ಸ್ಥಾಪನೆ ಮಾಡಿಕೊಳ್ಳಲು ಸಾಧ್ಯವೆ? ಯಾರಿಗೇ ಆದರೂ ಬಸವನ ತತ್ವ, ಓದು ಮುಖ್ಯ. ಆ ಮೂಲಕ ಬಸವ ನಮ್ಮೊಳಗೆ ಇಳಿಯಬೇಕು. ಆಗ ಬಸವಣ್ಣನನ್ನು ಬಿಟ್ಟು ಬೇರೆ ದೇವಸ್ಥಾನಗಳನ್ನು ಸುತ್ತಿಯೂ ಲಿಂಗಾಯತನಾಗಿ ಉಳಿದುಬಿಡುವ ಅಪಾಯ ತಪ್ಪುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮಠವೂ ‘ಅನುಭವ’ ಮಂಟಪ ಆಗಲಿ.
(AI ಕನ್ನಡಾನುವಾದ)
ಕೇಂದ್ರ ಗೃಹ ಸಚಿವಾಲಯವು (MHA) ಜನವರಿ 28, 2026 ರಂದು ಆದೇಶ ಹೊರಡಿಸಿ, ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಬೇಕು ಮತ್ತು ಅಲ್ಲಿರುವ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಇದು ದೇಶಭಕ್ತಿಯ ಕಾರ್ಯವಲ್ಲ; ಬದಲಿಗೆ ರಾಷ್ಟ್ರೀಯ ಹೆಮ್ಮೆಯ ಮುಖವಾಡ ಧರಿಸಿದ ‘ಸಾಂವಿಧಾನಿಕ ವಿಧ್ವಂಸಕ ಕೃತ್ಯ’ ಆಗಿದೆ..
ಇದನ್ನು ಅರ್ಥಮಾಡಿಕೊಳ್ಳಲು ನಾವು 1937ರ ಘಟನೆಗಳು, ಸಂವಿಧಾನ ಸಭೆಯ ನಿರ್ಧಾರಗಳು ಮತ್ತು ಸುಪ್ರೀಂಕೋರ್ಟ್ನ ಪ್ರಮುಖ ತೀರ್ಪಾದ ‘’ಬಿಜೋ ಇಮ್ಯಾನುಯೆಲ್ ವರ್ಸಸ್ ಕೇರಳ ರಾಜ್ಯ’’ (1986) ಪ್ರಕರಣವನ್ನು ನೆನಪಿಸಿಕೊಳ್ಳಬೇಕು.
1937ರ ಇತ್ಯರ್ಥವು ದೌರ್ಬಲ್ಯವಲ್ಲ, ಬದಲಿಗೆ ವಿವೇಕ. ಅಕ್ಟೋಬರ್ 1937ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಯಿತು. ಅಲ್ಲಿ ನಡೆದದ್ದು ಕೆಲವರು ಈಗ ಹೇಳುತ್ತಿರುವಂತೆ ‘ತುಷ್ಟೀಕರಣ’ವಲ್ಲ. ಡಾ|| ರಾಜೇಂದ್ರ ಪ್ರಸಾದ್ ಅವರು ನಿರ್ಣಯವನ್ನು ಮಂಡಿಸಿದರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಬೆಂಬಲಿಸಿದರು. ಮಹಾತ್ಮ ಗಾಂಧಿಯವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಈ ನಿರ್ಣಯವು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ಮುಸ್ಲಿಂ ಮಿತ್ರರು ಹಾಡಿನ ಕೆಲವು ಭಾಗಗಳ ಬಗ್ಗೆ ಎತ್ತಿದ ಆಕ್ಷೇಪಣೆಗಳಲ್ಲಿನ ಸತ್ಯವನ್ನು ಅವರು ಗುರುತಿಸಿದರು ಮತ್ತು ಮೊದಲ ಎರಡು ಚರಣಗಳು ಯಾರ ನಂಬಿಕೆಗೂ ಧಕ್ಕೆ ತರುವುದಿಲ್ಲ ಎಂದು ನಿರ್ಧರಿಸಿದರು.
ಬಂಕಿಮಚಂದ್ರ ಚಟರ್ಜಿಯವರು ಬರೆದ ಈ ಕವಿತೆಯಲ್ಲಿ ಮೊದಲೆರಡು ಚರಣಗಳ ನಂತರದ ನಾಲ್ಕು ಚರಣಗಳು ಹಿಂದೂ ದೇವತೆಗಳಾದ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಹೆಸರಿಸುತ್ತವೆ. ಒಂದು ಸಾಲಂತೂ ಮಾತೃಭೂಮಿಯನ್ನು “ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣಿ” (ಹತ್ತು ಆಯುಧಗಳನ್ನು ಹಿಡಿದ ದುರ್ಗೆ ನೀನೇ) ಎಂದು ವರ್ಣಿಸುತ್ತದೆ. ಮುಸ್ಲಿಂ ಅಧಿಕಾರಿ, ಕ್ರಿಶ್ಚಿಯನ್ ಶಿಕ್ಷಕ, ಸಿಖ್ ಸೈನಿಕ ಅಥವಾ ನಾಸ್ತಿಕ ವಿಜ್ಞಾನಿಯನ್ನು ಈ ಸಾಲುಗಳನ್ನು ಹಾಡುವಾಗ ಎದ್ದು ನಿಲ್ಲುವಂತೆ ಒತ್ತಾಯಿಸುವುದು ಏಕತೆಯನ್ನು ಬೆಳೆಸುವುದಿಲ್ಲ; ಅದು ಜಾತ್ಯತೀತ ಗಣರಾಜ್ಯದಲ್ಲಿ ಧಾರ್ಮಿಕ ಪರೀಕ್ಷೆಯನ್ನು ಹೇರಿದಂತೆ ಆಗುತ್ತದೆ. ರವೀಂದ್ರನಾಥ ಟ್ಯಾಗೋರ್ ಕೂಡ ಇದನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವುದನ್ನು ಬೆಂಬಲಿಸಿದ್ದರು..
ಸಂವಿಧಾನ ಮತ್ತು ರಾಷ್ಟ್ರಗೀತೆ: ಜನವರಿ 24, 1950ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ‘ಜನ ಗಣ ಮನ’ ರಾಷ್ಟ್ರಗೀತೆಯಾಗಿರುತ್ತದೆ ಮತ್ತು ‘ವಂದೇ ಮಾತರಂ’ ಅದಕ್ಕೆ ಸಮಾನವಾದ ಗೌರವವನ್ನು ಹೊಂದಿರುತ್ತದೆ ಎಂದು ಘೋಷಿಸಿದರು. ಆದರೆ ಸಂವಿಧಾನ ಸಭೆಯು ಕೇವಲ ಎರಡು ಚರಣಗಳ ಆವೃತ್ತಿಯನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ (National Song) ಅಂಗೀಕರಿಸಿತು. ಉಳಿದ ನಾಲ್ಕು ಚರಣಗಳನ್ನು ಉದ್ದೇಶಪೂರ್ವಕವಾಗಿಯೇ ಬಿಡಲಾಗಿತ್ತು, ಏಕೆಂದರೆ ಯಾವುದೇ ಜಾತ್ಯಾತೀತ ಗಣರಾಜ್ಯವು, ನಿರ್ದಿಷ್ಟ ಧಾರ್ಮಿಕ ದೇವತೆಗಳಿಗೆ ಅರ್ಪಿತವಾದ ಸಾಲುಗಳನ್ನು ಅಧಿಕೃತ ಸಂಕೇತಗಳನ್ನಾಗಿಸಲು ಸಾಧ್ಯವಿಲ್ಲ.
ಸಂವಿಧಾನದ 51 A (a) ವಿಧಿಯು ಪ್ರತಿಯೊಬ್ಬ ನಾಗರಿಕನು “ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು” ಎಂದು ಹೇಳುತ್ತದೆ. ಇಲ್ಲಿ ‘ರಾಷ್ಟ್ರೀಯ ಗೀತೆ’ಯ (ವಂದೇ ಮಾತರಂ) ಉಲ್ಲೇಖವಿಲ್ಲ. 1971ರ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯು ರಾಷ್ಟ್ರಗೀತೆ, ಧ್ವಜ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ, ಆದರೆ ಅದು ‘ವಂದೇ ಮಾತರಂ’ ಅನ್ನು ಒಳಗೊಂಡಿಲ್ಲ. ಆದ್ದರಿಂದ ಇದನ್ನು ಹಾಡದಿದ್ದರೆ ಅಥವಾ ಇದಕ್ಕಾಗಿ ಎದ್ದು ನಿಲ್ಲದಿದ್ದರೆ ಯಾವುದೇ ಕಾನೂನಾತ್ಮಕ ಶಿಕ್ಷೆಯಿಲ್ಲ...
ಬಿಜೋ ಇಮ್ಯಾನುಯೆಲ್ ಪ್ರಕರಣ ಮತ್ತು ಸುಪ್ರೀಂ ಕೋರ್ಟ್ ತೀರ್ಪು: 1985ರಲ್ಲಿ ಕೇರಳದ ಮೂವರು ಮಕ್ಕಳು ರಾಷ್ಟ್ರಗೀತೆಯನ್ನು ಹಾಡದ ಕಾರಣಕ್ಕಾಗಿ ಶಾಲೆಯಿಂದ ಹೊರಹಾಕಲ್ಪಟ್ಟರು. ಅವರು ಯೆಹೋವನ ಸಾಕ್ಷಿಗಳು (Jehovah’s Witnesse) ಎಂಬ ಪಂಥಕ್ಕೆ ಸೇರಿದವರಾಗಿದ್ದು, ಅವರ ನಂಬಿಕೆಯ ಪ್ರಕಾರ ದೇವರನ್ನು ಹೊರತುಪಡಿಸಿ ಬೇರೆಯವರನ್ನು ಸ್ತುತಿಸುವಂತಿರಲಿಲ್ಲ. ಅವರು ರಾಷ್ಟ್ರಗೀತೆಯ ಸಮಯದಲ್ಲಿ ಗೌರವದಿಂದ ಎದ್ದು ನಿಲ್ಲುತ್ತಿದ್ದರು, ಆದರೆ ಹಾಡುತ್ತಿರಲಿಲ್ಲ..
ಸುಪ್ರೀಂ ಕೋರ್ಟ್ ಈ ಮಕ್ಕಳ ಉಚ್ಚಾಟನೆಯನ್ನು ರದ್ದುಗೊಳಿಸಿತು. ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿಯವರು ತಮ್ಮ ತೀರ್ಪಿನಲ್ಲಿ ಹೀಗೆ ಬರೆದಿದ್ದಾರೆ: “ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುವುದು ಅದಕ್ಕೆ ನೀಡುವ ಸರಿಯಾದ ಗೌರವ. ಆದರೆ ಹಾಡಿನಲ್ಲಿ ಧ್ವನಿಗೂಡಿಸದಿದ್ದರೆ ಅದು ಅವಮಾನ ಎಂದು ಹೇಳುವುದು ಸರಿಯಲ್ಲ”. ಮೌನವಾಗಿರುವುದು ಕೂಡ ಅಭಿವ್ಯಕ್ತಿ ಸ್ವಾತಂತ್ರ‍್ಯದ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿತು.
ಗೃಹ ಸಚಿವಾಲಯದ ಆದೇಶದ ಸಮಸ್ಯೆಗಳು: ಆದರೆ ಈಗ ಹೊರಡಿಸಲಾಗಿರುವ ಗೃಹ ಸಚಿವಾಲಯದ ಆದೇಶವು ಸಂವಿಧಾನ ಸಭೆಯು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದ ನಾಲ್ಕು ಚರಣಗಳನ್ನು ಮರಳಿ ಸೇರಿಸಿದೆ. ರಾಷ್ಟ್ರಗೀತೆಯನ್ನು ಹಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದಾದ ಮೇಲೆ, ಸಂವಿಧಾನದಲ್ಲಿ ಉಲ್ಲೇಖವೇ ಇಲ್ಲದ ‘ರಾಷ್ಟ್ರೀಯ ಗೀತೆ’ಯನ್ನು ಹಾಡುವಂತೆ ಅಥವಾ ಅದಕ್ಕೆ ಧಾರ್ಮಿಕ ಚರಣಗಳಿದ್ದರೂ ಎದ್ದು ನಿಲ್ಲುವಂತೆ ಒತ್ತಾಯಿಸುವುದು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ. ಇದು ಸಂವಿಧಾನದ 25ನೇ ವಿಧಿಯ (ಧಾರ್ಮಿಕ ಸ್ವಾತಂತ್ರ‍್ಯ) ಉಲ್ಲಂಘನೆಯಾಗಿದೆ.
ನೈಜ ದೇಶಭಕ್ತಿ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಪ್ರಾರ್ಥಿಸುವುದಲ್ಲ. ಮೊದಲ ಎರಡು ಚರಣಗಳು ಭಾರತದ ಪ್ರಕೃತಿಯನ್ನು ವರ್ಣಿಸುತ್ತವೆ ಮತ್ತು ಅವು ಪ್ರತಿಯೊಬ್ಬ ಭಾರತೀಯನಿಗೆ ಸೇರಿವೆ. ಆದರೆ ಉಳಿದವುಗಳು ನಿರ್ದಿಷ್ಟ ದೇವತೆಗಳ ಆರಾಧನೆಯಾಗಿವೆ...
ತೀರ್ಮಾನ: ಯಾರೂ ವಂದೇ ಮಾತರಂನ ಗೌರವವನ್ನು ಪ್ರಶ್ನಿಸುತ್ತಿಲ್ಲ. ಆದರೆ “ದೇಶಭಕ್ತಿಯ ಹೆಸರಿನಲ್ಲಿ ಸರ್ಕಾರವು ನಾಗರಿಕರನ್ನು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಬಹುದೇ?” ಎಂಬುದಷ್ಟೇ ಇಲ್ಲಿನ ಪ್ರಶ್ನೆ. ಸಂವಿಧಾನದ ಪ್ರಕಾರ ಇದಕ್ಕೆ ಉತ್ತರ- ‘’ಒತ್ತಾಯಿಸುವಂತಿಲ್ಲ’’.
ಗೌರವಯುತವಾಗಿ ಮೌನವಾಗಿರುವುದು ದೇಶದ್ರೋಹವಲ್ಲ, ಅದು ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರ‍್ಯ..
- ಸಂಜಯ್ ಹೆಗಡೆ
(ಸುಪ್ರೀಂ ಕೋರ್ಟ್ ನ್ಯಾಯಾಧೀಶರು)


We use cookies to analyze website traffic and optimize your website experience. By accepting our use of cookies, your data will be aggregated with all other user data.